ನಾಟಿಂಗ್ಯಮ್‍ಷೈರ್
ಇಂಗ್ಲೆಂಡಿನ ಈಸ್ಟ್ ಮಿಡ್ಲೆಂಡ್ಸ್ ಪ್ರದೇಶದ ಕೌಂಟಿ. ಲಿಂಕನ್ ಷೈರ್, ಲೀಸೆಸ್ಟರ್ ಷೈರ್, ಡರ್ಬಿವೈರ್ ಮತ್ತು ಸೌತ್‍ಯಾರ್ಕ್ ಷೈರ್‍ಗಳ ನಡುವೆ ಇದೆ. ವಿಸ್ತೀರ್ಣ 2164 ಚ.ಕಿ.ಮೀ. ಜನಸಂಖ್ಯೆ 9,74,640 (1971). ಈ ಕೌಂಟಿ ದಕ್ಷಿಣ ಪೆನೈನ್‍ಗಳ ಪೂರ್ವಕ್ಕೆ ವಿಸ್ತಾರವಾಗಿ ಹಬ್ಬಿರುವ ತಗ್ಗು ನೆಲದ ಭಾಗ. ಪಶ್ಚಿಮಭಾಗದಲ್ಲಿ ನೆಲ 122-183 ಮೀ.ಗಳಷ್ಟು ಎತ್ತರವಾಗಿದೆ. ಪಶ್ಚಿಮದತ್ತ ಕಡಿದಾಗಿರುವ ಈ ಇಕ್ಕಟ್ಟಾದ ಉನ್ನತ ಪ್ರದೇಶದಲ್ಲಿ ಸುಣ್ಣದ ಕಲ್ಲಿನ ಕೆಳಗೆ ಇಂಗಾಲಸ್ತರಗಳುಂಟು. ಇಲ್ಲಿ ಕಲ್ಲಿದ್ದಲು ನಿಕ್ಷೇಪಗಳಿವೆ. ನಾಟಿಂಗ್ಯಮ್, ಮ್ಯಾನ್ಸ್‍ಫೀಲ್ಡ್ ಮತ್ತು ವರ್ಕಶಾಪ್ ಮುಖ್ಯ ಕಲ್ಲಿದ್ದಲು ಕೇಂದ್ರಗಳು. ಬಾಟ್ರಿಯಿಂದ ದಕ್ಷಿಣದತ್ತ ನಾಟಿಂಗ್ಯಮ್‍ವರೆಗಿನದು ಮರಳುಗಲ್ಲಿನ ಪ್ರದೇಶ. ಕಾಂಟಿಯ ಪೂರ್ವಭಾಗ ತಗ್ಗುನೆಲ. ಇದರ ನಡುವೆ ಟ್ರೆಂಟ್ ನದಿ ಹರಿಯುತ್ತದೆ. ಈ ಪ್ರದೇಶದ ಬಹುಭಾಗ ಷೆರ್‍ವುಡ್ ಅರಣ್ಯ. ಇಲ್ಲಿ ಓಕ್ ಮತ್ತು ಬರ್ಚ್ ಮರಗಳಿವೆ.

ಇದು ಕೃಷಿ ಪ್ರಧಾನ ಪ್ರದೇಶ. ಬಾರ್ಲಿ, ಗೋಧಿ, ಓಟ್ಸ್, ಸಕ್ಕರೆ ಬೀಟ್ ಮತ್ತು ಆಲೂಗಡ್ಡೆ ಮುಖ್ಯ ಬೆಳೆಗಳು. ಇಲ್ಲಿ ಹಣ್ಣು ಮತ್ತು ತರಕಾರಿ ತೋಟಗಳೂ ಇವೆ. ಕಲ್ಲಿದ್ದಲು ಇಲ್ಲಿನ ಮುಖ್ಯ ಖನಿಜ. ಹಾಲುಗಲು,್ಲ ಜೆಲ್ಲಿ ಇವೂ ಸಿಗುತ್ತವೆ.
ನಾರ್ಮನ್ನರ ಕಾಲದಲ್ಲಿ ಈ ಪ್ರದೇಶ ಉಣ್ಣೆ ಕೈಗಾರಿಕೆಗೆ ಹೆಸರಾಗಿತ್ತು. 16ನೆಯ ಶತಮಾನದಲ್ಲಿ ಈ ಕೈಗಾರಿಕೆ ಕುಂದಿತು. 1959ರಲ್ಲಿ ಕಾಲುಚೀಲದ ಚೌಕಟ್ಟಿನ ಉಪಜ್ಞೆಯಾದ ಮೇಲೆ ಹೆಣಿಗೆ ಉಡುಪುಗಳಿಗೆ ಇದು ಪ್ರಸಿದ್ಧವಾಯಿತು. ಈಗಲೂ ಇದು ಪ್ರಾಮುಖ್ಯ ಉಳಿಸಿಕೊಂಡಿದೆ. ನಾಟಿಂಗ್ಯಮ್ ಉಡುಪುಗಳ ಕೈಗಾರಿಕೆಯ ಕೇಂದ್ರ, ಸೈಕಲ್, ತಂಬಾಕು, ಔಷಧ ಮತ್ತು ಭಾರಿ ಎಂಜಿನಿಯರಿಂಗ್ ಇವು ಈ ಪ್ರದೇಶದ ಆಧುನಿಕ ಕೈಗಾರಿಕೆಗಳು. 

ನಾಟಿಂಗ್ಯಮ್ ಈ ಕೌಂಟಿಯ ಆಡಳಿತ ಕೇಂದ್ರ. ಕೌಂಟಿಯಲ್ಲಿ 10 ಜಿಲ್ಲೆಗಳು ಮತ್ತು 7 ಗ್ರಾಮಾಂತರ ಜಿಲ್ಲೆಗಳೂ ಇವೆ. 
ಪ್ರಾಗಿತಿಹಾಸಕಾಲದಲ್ಲಿ ಇಲ್ಲಿ ಜನವಸತಿಯಿತ್ತು. ರೋಮನ್ನರು ಇದನ್ನು ಆಕ್ರಮಿಸಿಕೊಂಡಿದ್ದರು. ದಕ್ಷಿಣ ಪೂರ್ವಭಾಗಗಳ ಫಲವತ್ತಾದ ಪ್ರದೇಶದಲ್ಲಿ ಆಂಗ್ಲಿಯನರು ನೆಲಸಿದ್ದರು. ಇದು ಮರ್ಸಿಯ ರಾಜ್ಯದಲ್ಲಿ ಸೇರಿತ್ತು. ವೆಡ್ಮೋರ್ ಕೌಲಿನ (878) ಅನಂತರ ಇದು ಡೇನರ ಅಧೀನದಲ್ಲಿತ್ತು. ಮಧ್ಯಯುಗದಲ್ಲಿ ಇಲ್ಲಿ ಅನೇಕ ಪ್ರಮುಖ ಲೌಕಿಕ ಮತ್ತು ಧಾರ್ಮಿಕ ಉಂಬಳಿಗಳಿದ್ದವು. ಕ್ರೈಸ್ತಮಠಗಳ ವಿಘಟನೆಯ ಅನಂತರ (1536-39) ಇಲ್ಲಿ ಜಮೀನ್ದಾರರು ಪ್ರಬಲರಾದರು. ಹಲವು ಜಹಗೀರುಗಳು ನಿರ್ಮಾಣವಾದವು.
 
 	ಇಲ್ಲಿ ಅನೇಕ ಧಾರ್ಮಿಕ ಕಟ್ಟಡಗಳಿವೆ. ಸ್ಟೇಪಲ್‍ಫರ್ಡ್‍ನಲ್ಲಿ ಪೂರ್ವ ರೋಮನ್ ಕಾಲದ ಸುಂದರ ಶಿಲುಬೆಯಿದೆ. ಇಲ್ಲಿಯ ಚರ್ಚುಗಳು ವಾಸ್ತುಶಿಲ್ಪಕ್ಕೆ ಹೆಸರಾಗಿವೆ. 1884ರ ಸೌತ್‍ವೆಲ್ ಮಠ ನಾರ್ಮನ್ ವಾಸ್ತುವಿನ ಸುಂದರ ಉದಾಹರಣೆ.
ಲಿಂಡನ್, ಲೀಸೆಸ್ಟರ್, ಡರ್ಬಿ, ಡಾಂಕಾಸ್ಟರ್, ಗ್ರ್ಯಾಂತ್ಯಾಮ್‍ಗಳೊಂದಿಗೆ ರೈಲು ಸಂಪರ್ಕವಿದೆ. ಕೌಂಟಿಯ ಒಳಭಾಗದಲ್ಲಿ ಟ್ರೆಂಟ್ ನದಿಯೂ ಬಾಟ್ರಿಯಿಂದ ಟ್ರೆಂಟ್‍ವರೆಗೆ ಐಡ್ಲ್ ನದಿಯೂ ಯಾನಯೋಗ್ಯವಾಗಿದೆ. 		
	(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ